ನನಗೊಂದು ಪತ್ರ – Delhi Poetry Slam

ನನಗೊಂದು ಪತ್ರ

By Naveen Veerabhadra

ಮನವೆ ಮೊಗ್ಗಾಗದಿರು ಅರಳಿ ಹೂವಾಗು 
ನಿಂತ ನೀರಾಗದಿರು ಹರಿಯೊ ಜಲವಾಗು ।
ಉಗಿಯ ಚಿಮ್ಮುತಲಿ ವೇಗ ನೀನಾಗು 
ಹೊಳೆವ ಚಂದಿರನ ಒಳಗ ಬೆಳಕಾಗು ॥

ಛಲದ ಬಲದ ಗುಟ್ಟ ಕೇಳದಿರು 
ಹೊರಡು ನೀ ಹೊತ್ತು ಜಯದ ಸೋಗು ।
ಗೆಲುವ ಯಂತ್ರಕೆ ಅರಸ ನೀನಾಗು 
ಮನಸಿನಾಸೆಗಳ ಭವದ ನನಸಾಗು ॥

ಗಿರಿಯ ತುದಿಯ ನೀರ್ಬುಗ್ಗೆ ಹರಿದಂತೆ 
ಹತ್ತಿ ಹಾರುತಿರು ಶಿಖರದೊಡಲುಗಳ ।
ಕೂಗಿ ಏರುತಿರು ಜಗದ ಮಜಲುಗಳ 
ಉಸುಕ ದಂಡೆಯ ತಲುಪೊ ನದಿಯಾಗು ॥

ಜಿಗಿದು ಕುಣಿದು ಬಿಚ್ಚು ಕಾಲಿನ ಗಂಟು 
ಹೊರಡು ಹಗುರಾಗಿ ತೊರೆದು ವಾಸ್ತವದ ನಂಟು ।
ಬೆಳಕಲ್ಲಿ ಉಷೆಯಾಗು ನಿಶೆಯಲ್ಲಿ ನಶೆಯಾಗು 
ಏನಾದರೊಂದಾಗು…  ಹೋಗು ಮುಂದ್ಹೋಗು 
ನಿಂತ ನೀರಾಗದಿರು ಹರಿಯೊ ಜಲವಾಗು ॥


Leave a comment