ವಿಧವೆಯ ಸ್ವಗತ – Delhi Poetry Slam

ವಿಧವೆಯ ಸ್ವಗತ

By Malini Vadiraj

ವಿಧವೆ! ವಿಧಾತನ ವಿಕೋಪದ ಕೈ ಗೊಂಬೆ!

ಗಂಡನಿರದ ಬಾಳು, ಬಾಳಲ್ಲ ಬರಿಯ ಗೋಳು
ಕೇಳಿದ್ದ ಕೊಡಿಸಿದ್ದ, ಮಲ್ಲಿಗೆಯ ಮುಡಿಸಿದ್ದ
ಸಿಟ್ಟಾಗಲು ನಾ, ಸಿಹಿ ತಿನಿಸಕೊಟ್ಟು ರಮಿಸಿದ್ದ
ನನ್ನ ಪರ ನಿಂತು, ಹಗಲಿರುಳು ಶ್ರಮಿಸಿದ್ದ

ಬಂಧು ಮಿತ್ರರು ತುಂಬಿರಲು ಮನೆಯೆಲ್ಲಾ
ಅವನ ಸಿಹಿ ನೆನಪೇ ಕಾಡುತಿದೆ ಮನವೆಲ್ಲಾ
ಅವ ಬಂದ ಹಾಗೆ, ಅವ ನುಡಿದ ಹಾಗೆ
ನನ್ನ ಮುಂಗುರುಳ ಹಿಂದಿಕ್ಕಿ ಹೋದ ಹಾಗೆ

ಅವನಿಲ್ಲವೆಂಬುದಾ ಅರೆ ಕ್ಷಣ ಮರೆತು ಹೋಗಿ
ಕಾದು ಕೂತೆನು ಸಂಜೆ, ಅವನ ಬರುವಿಕೆಗಾಗಿ
ಮೋಟಾರು ಗಾಡಿ ಶಬ್ಧಕ್ಕೆ ಚಿಗುರೊಡೆದ ಆಸೆ
ಹೊರಗೋಡಿ ನೋಡಲು ಬರಿಯ ನಿರಾಸೆ

ದಿನಗಳು ಉರುಳುತ, ಅವನನು ನೆನೆಯುತ
ನೋವನು ಮರೆಯುತ, ನನಗಾಗಿ ಬಾಳುತ
ಮುಂದಿರುವ ಬದುಕನ್ನು ಒಪ್ಪವಾಗಿಸಲು
ನಿಂತೊಡನೆ, ಕ್ಲಿಷ್ಟ ಸವಾಲುಗಳೇ ಸಾಲು ಸಾಲು 

ಮನೆ ಹೊರ ನಡೆದು ಕಣ್ಣೀರ ಚೆಲ್ಲುವ ಆಸೆ
ಹೊಸ ಮುಖಗಳ ಕಂಡು ದುಃಖ ಮರೆಯುವಾಸೆ
ಗಂಡನ ನುಂಗಿ ತಿರುಗುತ್ತಿರುವ ಹೆಮ್ಮಾರಿಯೆಂದು
ಮೂದಲಿಸಿ ಮೂಲೆಗುಂಪು ಮಾಡುವರಲ್ಲ ಖುದ್ದು

ನಾ ನಕ್ಕರೆ ಕಷ್ಟ, ಅತ್ತರೆ ಜನರಿಗೇಕೆ ಇಷ್ಟ
ನಾ ಸಿಂಗರಿಸಲು ಯಾರಿಗಾಗುವುದು ನಷ್ಟ
ನೀರಸ ಬಾಳನು ಹಸನಾಗಿಸುವ ಹಕ್ಕು 
ಅದಕ್ಕಾಗಿ ಭೇದಿಸುವೆ ಹೊಸ ದಾರಿಯ ದಿಕ್ಕು

ಸೂತ್ರವಿಲ್ಲದ ಸಮಯದ ಗೊಂಬೆ ನಾನಲ್ಲ 
ಲಗಾಮಿಲ್ಲದ ಹುಚ್ಚು ಕುದುರೆಯೂ ನಾನಲ್ಲ
ಬಾಳ ಬಂಡಿಯ ಏಕಾಂಗಿ ಸಂಚಾರಿಯೂ ಅಲ್ಲ
ಹಂಗಿನ ಅರಮನೆಯ ಒಡತಿಯೂ ನಾನಲ್ಲ

ಗಂಡನ ಸವಿ ನೆನಪಿನ ಬುತ್ತಿಯ ಹೊತ್ತು ನಡೆದು
ನೂರಾರು ವಿಧವೆಯರ ವಿಧಾನ ಬದಲಿಸಿ ಬರೆದು
ಜಗತ್ತಿಗೆ ಕೆಚ್ಚೆದೆಯ ಮಾದರಿ ಹೆಣ್ಣಾಗುವೆ
ಗುರಿ ಮುಟ್ಟಿದ ಬಳಿಕವಷ್ಟೆ ಮಣ್ಣಾಗುವೆ


1 comment

  • Hi Malini I read your poem today. Very realistic and touching. Congratulations.

    Kl Vidya Gowri

Leave a comment