ಅಭ್ಯುದಯಕ್ಕೊಂದು ಆವರಣ – Delhi Poetry Slam

ಅಭ್ಯುದಯಕ್ಕೊಂದು ಆವರಣ

By K. Ushaa Murlidhar 

ಅದು ಪಂಜರವಲ್ಲ ಅದು ಬಂಧನವಲ್ಲ 
ಅದು ಕಂಟಕವಲ್ಲ ಅದು ಕಂದಕವಲ್ಲ 
ಇರಲಿ ಒಂದು ಚೌಕಟ್ಟು ಅಚ್ಚುಕಟ್ಟಾಗಿ 
ಪರಿಧಿಯು ವ್ಯಾಪಿಸಿಹ ಕುರುಹಾಗಿ 

ಅದು ಸೀಮಿತವಲ್ಲ ಅದು ಸ್ಥಿರತೆಯು 
ಅದು ಬಾಧಕವಲ್ಲ ಅದು ಭದ್ರತೆಯು 
ಅಸ್ತಿತ್ವದ ಉಳಿವಿನ ಜೊತೆಯಲಿ 
ಸೀಮೆಯ ಇರವನು ಸಾರುವ ಅಸ್ಮಿತೆಯು 

ಇರಲಿ ಒಂದು ಅಭೇದ್ಯ ಆವರಣವು 
ಆಯಕಟ್ಟಿನ ನಿಬಿಡ ಪಹರೆಗೆಂದೆ 
ಬಿಡಿ ಬಿಡಿಯಾಗಿ ಉಡುಗಿ ಹೋಗುವ 
ಬಿರುಕ ನಿಯಮಿತದಿ ಕಳೆಯಲೆಂದೆ
 
ಅದು ಇರುವಿಕೆಗೊಂದು ತಳಹದಿಯು 
ಅದು ಮಾಸುವಿಕೆಯ ಅಳಿಸುವ ರಚನೆಯು 
ಅದರೊಳು ಬೇರು ಹಲವು ವಿಸ್ತರಿಸಿ ಬೆಳೆಯಲು 
ಕಾಯ್ವದದು ಸುತ್ತಲೂ ಸುಸ್ಥಿರ ಅಭ್ಯುದಯವ


Leave a comment