By Hema Morab

ಮಾನವ ಜೀವನ ನೀರಿನ ಮೇಲಿನ
ಗುಳ್ಳೆ ಇದ್ದಂತೆ
ಅದನ್ನು ಅರಿತು ಬಾಳೋಣ ನಾವೆಲ್ಲ ||ಪ||
ಯಾರೂ ಇಲ್ಲಿ ಶಾಶ್ವತ ಇರಲು
ಬಂದಿಲ್ಲ, ಮತ್ಯಾಕೆ ಯೋಚಿಸೋದು
ಸುದೀರ್ಘವಾಗಿ ತಲೆ ಕೆಡಿಸಿಕೊಂಡು ||೧||
ಬದಲಾವಣೆಯು ಈ ಜಗದ ನಿಯಮವಿರುವಾಗ
ಪ್ರಕೃತಿಗೆ, ನಾವು ಸೂಜಿಗಿಂತ ಚಿಕ್ಕವರು
ನಮಗೆ ಅನ್ವಯಿಸುವುದಿಲ್ಲವೇ ||೨||
ಕಷ್ಟ -ಸುಖ ಬರತಾವ ಜೀವನದಾಗ
ನಮ್ಮನ್ನು ಗಟ್ಟಿ ಮಾಡಾಕ, ಅದನ್ನು ಅರಿತು
ಜೀವನ ಸಾಗರ ದಾಟಬೇಕು ನಾವೆಲ್ಲ ||೩||
ಇರಬೇಕು ಇದ್ದು ಜಯಿಸಬೇಕು
ಜೀವನದೊಂದಿಗೆ ಹೊಂದಾಣಿಕೆ ಆಗೋದು
ನಮ್ಮ ನಿಯಮವಾಗಲಿ ||೪||
ಮಾನವನ ಜೀವನ ಸುಂದರ
ಎಂಬುದು ಅರಿತು
ಸಂತಸದಿಂದ ಇರೋಣ ನಾವೆಲ್ಲ ||೫||
ಉಸಿರು ಹೋಗಲು ಒಂದು ಗಳಿಗೆ
ಸಾಕು ಎಂಬುದು ತಿಳಿದು
ಇರುವ ತನಕ ನೆಮ್ಮದಿಯಾಗಿ ಬಾಳೋಣ ||೬||
ಸಂತಸ, ಶಾಂತಿ, ದೈರ್ಯ, ಉತ್ಸಾಹ
ಎಲ್ಲಿ ಸಿಗುವುದಿಲ್ಲ, ಅವು ನಮ್ಮೊಳಗೆ
ಉತ್ಪತ್ತಿಯಾಗುವ ಜೀವನ ಔಷಧಿ ಅವೆಲ್ಲ ||೭||
ಹುಟ್ಟು -ಸಾವು, ಕಷ್ಟ -ಸುಖ
ಯಾರನ್ನೂ ಬಿಟ್ಟಿಲ್ಲ, ಅವಕ
ಬಡತನ-ಸಿರಿತನ ಎಂಬ ಬೇಧವಿಲ್ಲ ||೮||
ಎಂಟೊಂಬತ್ತು ದಶಕದಾಗ ನಮ್ಮ ದೇಹ
ಒಂದೆರಡು ಶತಕದಾಗ ನಮ್ಮ ಹೆಸರು
ನಶಿಸಿ ಹೋಗುವುದು ಗುರುತು ಸಿಗದಂಗ ||೯||
ಪಾಲಿಗೆ ಬಂದದ್ದು ಪಂಚಾಮೃತ
ಎಂದರಿತು ಮುಂದೆ ಸಾಗೋಣ
ಗುರಿ ತಲುಪೋಣ ||೧೦||