By Farhanaaz Maski

ನಾನುಗಳ ವಿಭಿನ್ನ ನೆಲೆಗಟ್ಟುಗಳಲ್ಲಿ...
ನಾನು ರೂಪುಗೊಳ್ಳುತ್ತಿದ್ದೇನೆ.....
ಮೊದಲ ಮಳೆಯ ಋತು ನರ್ತನದಂತೆ
ಕಡಲ ಕರುಳಲಿ ಮುತ್ತು ಮೂಡಿದಂತೆ
ಹಸಿರು ಹಾದಿಗೆ ಹೊಸ ಹೆಜ್ಜೆ ಇಟ್ಟಂತೆ
ಅಸ್ತಿತ್ವ ಅರಸುವ ಆರಂಭಿಕ ಅಕ್ಷರದಂತೆ
ನಾನು ರೂಪಾಂತರಗೊಳ್ಳುತ್ತಿದ್ದೇನೆ.....
ಹಸಿ ಬೀಜಕೆ ಮಸಿ ಬಳಿದು ಹಣ್ಣಾಗಿಸಿದಂತೆ
ಸುಳಿ ಗಾಳಿಗೆ ಸಿಲುಕಿ ಸೊರಗಿದ ಸ್ವರಗಳಂತೆ
ಹುಸಿ ಭವಿಸುವ ಭಾವನೆಗಳು ಭಾರವಾದಂತೆ
ಕಹಿ ನೆನಪುಗಳು ನುಸುಳಿ ನಯನ ನವೆಯಾದಂತೆ!!!
ನಾನು ಇನ್ನೂ, ರೂಪಾಂತರಗೊಳ್ಳುತ್ತಿದ್ದೇನೆ....
ಕಾಂಕ್ರೀಟಿನ ಕಾಡಿಗಾಗಿ ಕೊಳೆತ ನಿಸರ್ಗದಂತೆ
ನಗರ ನಕಾಶೆಗೆ ಬಲಿಯಾದ ಶೀಲಾಶರೀರದಂತೆ
ಏಳಿಗೆಯ ಅಡಿಯಲಿ ಅವನತಿಗೈದ ಹಳ್ಳಿಯಂತೆ
ಮೌನ ಮಂತ್ರರರ ಮೂಕ ಮುದ್ರೆಗಳಂತೆ!!!
ನಾನೂ ರೂಪಾಂತರಗೊಂಡಿದ್ದೇನೆ...
ಧ್ವಜಧಾರಿಗಳಿಂದ ಧ್ವಂಸಗೊಂಡ ದೇಶದಂತೆ
ಶೂನ್ಯಗಾಡು ಸೇರಿದ ಶೋಕ ಗೀತೆಯಂತೆ
ಸಮರಾನಂತರ ಶೋಧಿಸಿದ ಅವಶೇಷಗಳಂತೆ
ಮನುಷ್ಯತ್ವ ಮರೆತು ಮೆರೆವ ಮನುಜರಂತೆ.....
ನಾನೂ ರೂಪುಗೊಂಡಿದ್ದೇನೆ!!!
ಫರ್ಹಾನಾಜ಼್. ಮಸ್ಕಿ
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೆಲಮಂಗಲ
562123