By Yashas Nagar
"""ಕಂದರ್ಪನವತಾರ""
--ಅರವಿoದ--
ಪ್ರೀತಿ ಹುಟ್ಟಲು ಪ್ರಸವಬೇನೆಯಿಲ್ಲ
ನಿರೀಕ್ಷೆಯಂತೂ ಮೊದಲೇ ಇಲ್ಲ
ದುಃಸ್ವಪ್ನದಿಂದ ಎಚ್ಚೆತ್ತ ಮಗುವಂತೆ
ಅನಿರೀಕ್ಷಿತ ಬೆವರು-ನಿರಾಳ ನಿಟ್ಟುಸಿರು
ಮಲೆನಾಡಿನ ಕಸಕ್ಕೂ ಒಂದು ಕಳೆಯಿದೆ
ಕಾಲುತುಳಿತಕ್ಕೆ ಸಿಕ್ಕಿ ಮುದುಡಿದರೂ
ಜೀವ ಒಂದುಳಿದಿದೆ
ಮಷಿನ್ನು-ಔಷಧಿಗೆ ಮೈಯೊಡ್ಡಿದರೂ
ದರಿದ್ರ ಉಸಿರು ಹಾಗೇ ಇದೆ
ಮಳೆಬಿದ್ದ ಮಣ್ಣಲ್ಲಿ ಮೂಗು.
ಬೋರುಕೊರೆದ ಮನಸು.
ಹೊಂಬಿಸಿಲ ಹೊಳಪು ದಾರಿತಪ್ಪಿ ಅಂಟಿದರೆ ಸಾಕು
ಹುಟ್ಟಿಸಿದ ಪುಣ್ಯಾತ್ಮನಿಗೆ ಬಿದ್ದಲ್ಲೇ ಅಡ್ಡಡ್ಡ ಮತ್ತೆ ಬೀಳುವೆ
ಹಸಿರುಮನೆಯಿಂದ ಕಪ್ಪುಬಂಗಲೆಗೆ ಶಿಫ್ಟ್ ಆಗಿ ಕಾಲ
ಗಂಟಲಲಿನ್ನೂ ಅಡಿಕೆಯ ಒಗರು
ಆತ್ಮ ಫಿಲ್ಟರ್ ಆಗಲು ಒಲವ ಕಿಡಿ ಅನಿವಾರ್ಯ
ಇಷ್ಟವಾದುದನ್ನು ಪಡೆಯಲು ನಿರ್ವೀರ್ಯ
ಆಸೆ ಅಪರಾಧ ಯಾಕಾಯಿತೋ
ಬುದ್ಧನ ಮಾತಿಗಿಷ್ಟು ಧಿಕ್ಕಾರ!
ಬಿಳಿಬೆಟ್ಟದೊಡೆಯನಿಗೆ ಬಾಣ ಬಿಡುವ ಗಂಡಸ್ಯಾರು
ಕಲ್ಲುಧ್ಯಾನದ ಹುಂಬನನ್ನು ಬಿಳುಚಿಸುವರ್ಯಾರು
ಅವನೆಷ್ಟು ವಡ್ಡನಿರಬೇಕು!
ಒದ್ದೆಪಂಚೆ ನೋಡಿದರೆ ಕೇಳಬಾರದ ಪ್ರಶ್ನೆ
ಸೋಜಿಗದ ಬೆವೆತ ರಟ್ಟೆ
--ಅಶೋಕ--
ಆಗಾಗ ಬಿದ್ದು ಕೊಸರಾಡಿ
ಪ್ರತೀ ದಿನದ ಪಾಠವಾಗಿ
ಡಿಗ್ರೀ ಮುಗಿಸುವ ಹವಣಿಕೆ
ಪಾಸು-ಫೇಲಿನ ಚಡಪಡಿಕೆ
ಬಲಕ್ಕೆ, ಎಡಕ್ಕೆ ಎಳೆದರಾಯಿತು
ಬದುಕು ಬದಲಿಸುವ ಸಂಗಾತಿ
ಫೋಟೋದಲ್ಲಿ ಓರೆಮೂಗು
ನನ್ನದೇನು ಸಂಪಿಗೆಯಲ್ಲ
ಬುದ್ಧಿಮoದವಿರಬೇಕು, ನಾನೇನು ನ್ಯೂಟನಲ್ಲ
ಮ್ಯೂಟಾಗಿದ್ದರೆ? ಕಿವಿಗೆ ಕೆಲಸವಿಲ್ಲ
ಎಡ-ಬಲ, ಯಾವುದೋ ಒಂದು
ಅನಿಸಿದಷ್ಟು ಮಾತು
ಬಾಣದ ತುರಿಕೆ
ಅಪ್ಪನ ದುಡ್ಡು, ಡೇಟ್ ಎಲ್ಲಿಂದ ಬಂತು?
ಬಸ್‌ಸ್ಟಾoಡೇ ಹೋಟೆಲ್ಲು
ಬನ್ನು, ಟೀ-ಹೊಸ ಬಿಲ್ಲು
ಇರುವುದೆಲ್ಲವ ಬಿಟ್ಟು ಇರದುದರ ವರ್ಣನೆ
ಥೇಟ್ ಕಾಳಿದಾಸನ ಆವಾಹನೆ
ಯಾಕೆ ಅಂತ ಕೇಳಬೇಡಿ
ವಯಸ್ಸು ಮಾತ್ರ ಮಾತಾಡುವುದಿಲ್ಲಿ
ಮೂಗು ನಿಮ್ಮಲ್ಲೇ ಇರಲಿ
ಕೆಂಪುಸುಮದಲ್ಲಿ ಮನ್ಮಥನ ಪ್ರತಿರೂಪ
ಬಯಕೆಗೂ ಬಣ್ಣಕೊಡುವ ಸಹಜದೀಪ
ರತಿ ನೋಡಿ ಈಗಲಾದರೂ ನಗಬಹುದಿತ್ತು
ಒಣಕಲು ದೇಹಕ್ಕೆ ಕಿಚ್ಚು ಹಚ್ಚಿಸಬಹುದಿತ್ತು
ಓದು-ಅಂಕ-ಸುoಕದ ನಡುವೆ
ಬಡಿದೆಬ್ಬಿಸುವವರೆಗೂ
ಇವರಿಬ್ಬರಿಗೂ ಲಾಂಗ್ ವೆಕೇಷನ್
ಕಣ್ಬಿಟ್ಟ ಶವ. ಶಿವ ಶಿವಾ,
ಶವ ಸುಡಬೇಡ.
--ಚೂತ--
ಏರಿದಷ್ಟೂ ಮುಗಿಯದ ಮೆಟ್ಟಿಲು
ಕಾಣದ ಸ್ವರ್ಗಕ್ಕೆ ಭಾವದೇಣಿ
ಹತ್ತುವ ಬಯಕೆಗೆ ಹತ್ತುತಲೆ
ಗೆಲ್ಲಲು ಮಾತ್ರ ಬೀಳುವ ಕಟ್ಟಳೆ
ನಕ್ಕಳಿರಬೇಕು. ನನ್ನ ನೋಡಿ
ಮುಂಗುರುಳು ತೀಡಿದಳಿರಬೇಕು.
ಎಲ್ಲಿಂದ, ಹೇಗೆ ತೊಡಗುವುದು?
ಜನ್ಮಸಂಸ್ಕಾರ ತೊರೆದರಷ್ಟೇ ಸುಖಪ್ರಾಪ್ತಿಯಂತೆ
ಒಳ್ಳೆಯತನ ಬಿಟ್ಟರಷ್ಟೇ ಗಂಡಸುತನವoತೆ
ಯಾವ ಅಡಕಸುಬಿಯ ಉಪದೇಶವೋ ಏನೋ!
ಚಾದರ ನಾಚಿ ಮುದುಡಿತು-ಕೂದಲು ದಿಂಬಿಗoಟಿತು
ಮುಚ್ಚಿದ ಕಿಟಕಿ ತೆಗೆಯದೇ ವರ್ಷ ಕಳೆಯಿತು
ತೋರಣಕ್ಕೆ ಅಡ್ಡವಾಸನೆ
ಜಾತಕಕ್ಕೆ ಅಳಿಸಲಾಗದ ಕಪ್ಪುಚುಕ್ಕಿ
ಮುಕ್ಕಣ್ಣ ಮೈಕೊಡವಿ ಎದ್ದ
ಕೈಲಾಸ ಕರಗುವುದು ಸಿದ್ಧ
ಕುಟುಂಬ, ಕೆಲಸ, ಜವಾಬ್ದಾರಿ, ಕನಸಿನ ಡಮರು
ಅಂಡುಸುಟ್ಟoತೆ ಅರಚಿ ಪರಚಾಡಿತು
ಜಾರ ಮಾರ
ಸುಡಲಿ ಮಾರ
ಸಾಯಲಿ ಮಾರ!
ಮಾರ್ ಮಾರ್ ಮಾರ
--ನವಮಲ್ಲಿಕಾ--
ಕಪ್ಪು ಹೃದಯಕ್ಕೆ ತಿಳಿನೀಲಿ ಬಣ್ಣ
ವರ್ಷವೂ ಪರದಾಟದ ಪ್ಲಾಸ್ಟರ್
ಸೇರದ ಊಟ-ಬಾರದ ನಿದ್ದೆ
ಕನಸಲ್ಲಿ ಖಾಯಂ ಸದ್ದೇ
ತೋಳಿಲ್ಲದ ಬದುಕ ಅಪ್ಪುವುದು ಹೇಗೆ
ಅದೇ ಸಂಬಳ, ಅದೇ ಆಫೀಸು
ಮನೆಗೆ ಬಂದು ಒರಗುವ ಮಡಿಲಿಗೆ ಕೈಯಾರೆ ಬೆಂಕಿ
ಬೂದಿ ಬಾಯಿಗಿಟ್ಟು ಅಳು ಕಟ್ಟಬೇಕಷ್ಟೇ
ಹೊರಳಾಡಿ ಹೊಗೆಯಾಗಬೇಕಷ್ಟೇ
ಅವಳೆಷ್ಟು ನರಳಿರಬೇಕು!
ಸ್ವಾರ್ಥಪ್ರೀತಿಯ ಜಾಣತನಕೆ
ಅರಿವಿಗೆ ಬಾರದ ಸುಳ್ಳುಸುಖಕೆ
ರತಿ. ಗರತಿ?
ರತಿ. ಇರುತೀ?
ಹೊಸ ಜಾತಕ. ಹಳೇ ಬದುಕು.
ತೊಳೆಯಲಾಗದ ತಪ್ಪಿಗೆ ಬಿಳಿ ಷರ್ಟು
""ನಿಂಗಿಷ್ಟ? ನಂಗಿಷ್ಟ? ನಮಗಿಷ್ಟ?'
ಊರವರ ಧರ್ಮಕ್ಕೆ
ಮೂರೆಳೆಯ ಜನಿವಾರ, ಮೂರುಗಂಟು
ಎಲ್ಲಾ ಒಂದಕ್ಕೆ ಮೂರು
ರತಿ. ಗರತಿ?
ರತಿ. ಇರುತೀ?
--ನೀಲೋತ್ಪಲ--
ಬಾಗಿದ ಬೆನ್ನಿಗೆ ಅನಿಶ್ಚಿತ ಊರುಗೋಲು
ಮಣ್ಣಾಗಲು ಸಾರ್ಥಕ್ಯದ ಸೋಗು
ಒಂಟಿತನದ ಯುದ್ಧಕ್ಕೆ ಕೃಷ್ಣಸಾರಥ್ಯ
ಕೊನೆಗೂ ಕೊನೆಯೊಂದೇ ಸತ್ಯ
ಬೂದಿ ವಿಭೂತಿ
ಹೊಗೆ ಹೋಮ
ಮೂಳೆ ಸರ
ಶಿವನಿಗೇನು. ಕೆಟ್ಟಧೈರ್ಯ.
ಕುಂಕುಮವಿರದ ಹಣೆಗೆ ಕುರುಡುತನದ ಶಿಕ್ಷೆ
ಇನ್ಯಾವಳದೋ ತಪಸ್ಸಿಗೆ ಮಕ್ಕಳ ಭಿಕ್ಷೆ
ಆಗಿದ್ದಾಗಿದೆ. ಹೋಗಿದ್ದಾಗಿದೆ.
ಎಡ. ಬಲ. ಹಿಂದೆ. ಮುಂದೆ.
ಮರೆವಿನ ವರ ಬೇಕಷ್ಟೇ.
ಉರುಳು ಬೀಳುವ ಮೊದಲು
ಕರುಳಿದೆಯೆಂಬ ಭರವಸೆ ಸಾಕಷ್ಟೇ.
ನಡೆದಿದ್ದೇ ರುದ್ರ
ಮುಂದಿನದ್ದು ಯುದ್ಧ
ಮತ್ತೆ ಹುಟ್ಟುವ ಸೀನೇ ಇಲ್ಲ.
ರತಿ. ಗರತಿ. ಸಾಕು ಮಾರಾಯ್ತಿ.
ಪುನರ್ಜನ್ಮದ ಕನಸು ಈಗಲೇ ಕಂಡರೆ ತಪ್ಪಾ?"