By Surabhi K
ಸಾಗರದ ಅಲೆಯ ಆರ್ಭಟದೊಳಗೊಂದು
ನೀರವ ಮೌನ ಬೆರೆತಿತ್ತು.
ಆ ತರಂಗಗಳ ಏರಿಳಿತದೊಂದಿಗೆ
ಎನ್ನ ಅಂತರಂಗ ಮಿಡಿದಿತ್ತು.
ಮೌನವ ಸೀಳುತ ದನಿಯೊಂದು
ಹಾಡಿನ ಹೊನಲಾಗಿ ಹರಿದಿತ್ತು.
ಕೆನ್ನೆ ಕೆಂಪಾಗಿ ನಾಚಿತ್ತು
ಸೂರ್ಯನ ಬೀಳ್ಕೊಟ್ಟ ಬಾನು.
ಮುಳುಗಿ ಬಂಗಾರದ ಹೊನಲಾಯ್ತು
ತರಂಗಗಳ ನಡುವೆ ಭಾನು.
ದೂರದ ದೋಣಿಯ ಛಾಯೆಯೊಂದು
ದಿಗಂತದೆಡೆಗೆ ಸಾಗಿತ್ತು.
ಅಲೆಯ ಅಪ್ಪುಗೆಯ ಅಪೇಕ್ಷೆಯಲ್ಲಿ
ತೀರ ಮೌನದಿ ಕಾದಿತ್ತು.
ಬಂದ ಅಲೆಯ ಆಲಿಂಗನ
ಕ್ಷಣಮಾತ್ರವೆ ! ಮತ್ತೆ ಹೊರಟಿತ್ತು.
ಮತ್ತೆ ಸೇರುವ ಹಂಬಲದಲ್ಲಿ
ಕಣ ಕಣವು ಸಂಭ್ರಮದಿ ಕಾಯುತ್ತಿತ್ತು.